ಜಗನಾದನ ಇಂಪು – ೫೦
(ಜ್ಞಾನ ಎಂಬ ಶಿವನ ಮತ್ತು ನನ್ನ ನಡುವೆ ಇರುವಂತಹ ನಿಷ್ಕಳಂಕ ಮನೋಜ್ಞ ಪ್ರೇಮದ ಬಗ್ಗೆ ಬರೆದಿದ್ದೇನೆ.)
ಶಿವನಿವ ತಾಂಡವವಾಡುತಲಿರುತಲಿ
ಡಿಂಡಿಮ ಢಮಢಮ ಗುಡುಗುವುದು|
ನಟ ನಡೆದಾಡುವ ಸಾಗುವ ಪಥದಲಿ
ಅಂತಿಮ ಘಮ ಮನ ಸೂಸುವುದು||
ಜಿನುಜಿನುಗೆನ್ನುತ ಚಿಮ್ಮುವ ತಿಮಿರೇ
ನೀ ಬಡೆಬಡೆದಾಡುತ ಬೆರಗದಿರು|
ಚರ ಅಚರಽ ಜನಕಽನಿವ ಮದಿರೇ
ನೀ ಸವಿಯುತಲಾಗುವೆ ಜ್ಞಾನದ ಅದಿರು||
ಡಮರುಽ ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತಾಂಡವ ನೃತ್ಯ ಮನೋಹರ ಕಾಲ
ಸುಗುಣ ನಿನಾದದಿ ಕಾಲ ಸುಕಾಲ||೧||
ತಿರುಗುವ ಕಾಲದೀ ತಾವರೆ ಕಾಣಿಸಿದೆ
ಕೆಸರಿನ ಕೆರೆಯಲಿ ತೇಲುತಲೀ|
ಕನಸಿನ ನೋಟವು ಮನಸನು ಕಾದಿಸಿದೆ
ಕಮಲ ಪಡೆಯಲದು ಬಯಸುತಲೀ||
ದಾಟಲು ತಿಳಿದೆನಗೆನಿತೋ ಮರ್ಮರ
ಕರ್ಕಶವಾಯಿತೊ ಮನ ಮಿಡಿತ|
ಕನಸನು ಕಾಣುತ ತಿರುಗಿದೆ ದುರ್ಧರ
ಶಿವನೆದೆ ಕಮಲಕೆ ನನ್ನಯ ತುಡಿತ||
ಡಮರು ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತಿರುಗುವ ಕಾಲದ ಮನದ ಅಹಂಕಾರ
ನಿರ್ಗುಣ ಜೋತ ತದೇಕ ಓಂಕಾರ||೨||
ಕಲರವ ರಮಿಸಿ ಸವಿಯೊ ಸುವ್ವಿ ರಾಗದಿ
ಪದುಮ ಪರಮ ಮನ ಭಕುತಿಯ ಸಾರಿ|
ಬಯಸಿಹೆ ಅದನು ನಾ ಕುಲುಮೆಲಿ ಚಾಗದಿ
ಅರಿಷಡ್ವರ್ಗವ ಸುಡುಲುತ ಭಾರಿ||
ಈಜಲು ಕಲಿಸಲು ಬಂದಿಹೆ ನೀನು
ಕೆಸರ ನಡುವೆ ಹಸನಾಗಿಸಿ ಸ್ಥೈರ್ಯದಿ|
ಕುಶೇಶಯ ಅರಳಿದೆ ನುಗ್ಗಲು ನಾನು
ನಡೆವೆ ಮುಂದೆ ಜಗನಾದನ ಧೈರ್ಯದಿ||
ಡಮರು ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತೇಲುವ ಕಾಯದ ಆಧರಸಾರ
ನಿಜಗುಣ ಮಾಯೆ ನೀ ಸಮರಸಕಾರ||೩||
-ಅಮೋಘಂ ನಾದಭೃಂಗ (Amogh Kodangala)